ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

*ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು*

ಗಾನಗಂಧರ್ವನೆಂಬ ಬಿರುದಿನ ಮೂಲಕವೇ ಪ್ರಸಿದ್ಧರಾಗಿರುವ ಕೆ.ಜೆ. ಯೇಸುದಾಸ್ ತಮ್ಮ ಸಿನಿಮಾ ಸಂಗೀತ ಪಯಣವನ್ನು ಆರಂಭಿಸಿದ್ದು ಈ ಕೆಳಗಿನ ಹಾಡಿನ ಮೂಲಕ… । 

ಜಾತಿ ಭೇದಂ ಮತದ್ವೇಷಂ

ಏದುಮಿಲ್ಲಾದೆ ಸರ್ವರುಂ

ಸೋದರತ್ವೇನ ವಾಳುನ್ನ

ಮಾತೃಕಾ ಸ್ಥಾಪನಮಾಣಿದ್

“ಜಾತಿ ಭೇದ, ಮತ ದ್ವೇಷಗಳಿಲ್ಲದೆ  ಸರ್ವರೂ ಸೋದರರಂತೆ ಬಾಳುವ ಮಾದರಿ ಸಂಸ್ಥೆಯಿದು” ಎಂದು ಈ ಸಾಲುಗಳನ್ನು  ಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಮೊದಲ  ಧಾರ್ಮಿಕ ಸಂಸ್ಥೆಯಾದ ಶೋಷಿತ ಅವಕಾಶ ವಂಚಿತ ಜನರಿಗೆ ಸ್ವಾಭಿಮಾನ ಆತ್ಮಗೌರವದ ಬಾಗಿಲು ತೆರೆದ ಕೇರಳದ ಅರುವಿಪ್ಪುರಂ ದೇಗುಲದ ಗೋಡೆಯಲ್ಲಿ ಗುರುಗಳು ಬರೆಸಿದ ವಾಕ್ಯಗಳು ಇವು. ಸುಮಾರು ಹತ್ತು ವರ್ಷಗಳ ಹಿಂದೆ ಗುರು ಸಮಾಧಿ ದಿನದಂದು ಕೆ. ಜೆ. ಯೇಸುದಾಸ್ ಗುರುದೇವರ ಬಗ್ಗೆ ಆಡಿದ ಮಾತುಗಳು ಈ ಕೆಳಗಿನಂತೆ ಇವೆ.

ನನ್ನ ಬದುಕಿನ ಬಹುದೊಡ್ಡ ಹೆಜ್ಜೆಯನ್ನಿಟ್ಟದ್ದು ಶ್ರೀನಾರಾಯಣ ಗುರುದೇವರ ಈ ಮಹಾಕಾವ್ಯವನ್ನು ಹಾಡುವುದರ ಮೂಲಕವಾಗಿತ್ತು. ಇದು ನನ್ನ ಬದುಕಿನ ಬಹುದೊಡ್ಡ ಪುಣ್ಯಗಳಲ್ಲೊಂದೆಂದು ನಾನು ಭಾವಿಸಿದ್ದೇನೆ. ‘ಕಾಲ್ಪಾಡುಗಳ್’ ಎಂಬ ಸಿನಿಮಾಕ್ಕಾಗಿ ನಾನು ಮೊದಲು ಹಾಡಿದ, ಈಗಲೂ ಹಾಗೂ ಎಂದೆಂದೂ ಹಾಡುತ್ತಲೇ ಇರಬೇಕನ್ನಿಸುವ ನಾಲ್ಕು ಸಾಲುಗಳಿವು. ಇವು ನಾನು ಸಿನಿಮಾಕ್ಕಾಗಿ ಹಾಡಿದ ಮೊದಲ ಹಾಡಿನ ಸಾಲುಗಳೂ ಹೌದು. ಈ ನಾಲ್ಕು ಸಾಲುಗಳಲ್ಲಿ ಗುರುಗಳು ತೋರಿಸಿಕೊಟ್ಟ ಮಹಾತತ್ವದ ಕಾರಣಕ್ಕಾಗಿ ನನಗಿದು ಹೆಚ್ಚು ಇಷ್ಟ. ಎಲ್ಲಾ ಬಗೆಯಲ್ಲೂ ನನ್ನ ಬದುಕಿನ ಮೇಲೆ ಬಹಳ ಪ್ರಭಾವ ಬೀರಿದ ಸಾಲುಗಳಿವು. ನಾರಾಯಣ ಗುರುಗಳು ನನ್ನ ಬದುಕಿಗೆ ಗುರುವಾದದ್ದೂ ಇದರ ಮೂಲಕವೇ.

ಮತಗಳೂ ಜಾತಿಗಳೂ ಬಹುಸಂಖ್ಯೆಯಲ್ಲಿರುವ ನಮ್ಮ ಸಮಾಜಕ್ಕೆ ಏಕತೆಯ ಸಂದೇಶವನ್ನು ಇಷ್ಟೊಂದು ಸರಳವೂ ಸುಂದರವೂ ಆದ ಬಗೆಯಲ್ಲಿ ಹೇಳಿಕೊಟ್ಟ ಮತ್ತೊಬ್ಬ ಗುರುವೋ ಅಥವಾ ಗುರವಾಕ್ಕುಗಳೋ ಇರಲಾರವೇನೋ. ಜಾತಿ ಭೇದ, ಮತ ದ್ವೇಷಗಳಿಲ್ಲದ ಆ ಸುಂದರ ಸ್ಥಳ ಕೇರಳವಾಗಿರಬಹುದು, ಭಾರತವಾಗಿರಬಹುದು ಅಥವಾ ಈ ವಿಶ್ವವೇ ಆಗಿರಬಹುದು. ಅದೊಂದು ಸುಂದರ ಕನಸು. ಈ ಗುರು ಸಮಾಧಿ ದಿನದಂದು  ಗುರುಗಳು ನಮಗೆ ಕೊಟ್ಟ ಆ ಸುಂದರ ಕನಸಿಗೆ ನಾವು ಹತ್ತಿರವಾದವೇ ಅಥವಾ ಅದರಿಂದ ದೂರವಾದವೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಿದೆ.

 ಈ ನಾಲ್ಕು ಸಾಲುಗಳನ್ನು ಸಿನಿಮಾಕ್ಕಾಗಿ ರೆಕಾರ್ಡ್ ಮಾಡುವಾಗ ನನಗದರ ಅಗಾಧ ಅರ್ಥವ್ಯಾಪ್ತಿಯ ಅರಿವಿರಲಿಲ್ಲ. ಮತ್ತೆ ಅದು ನನ್ನೊಳಗೇ ಅನುರಣಿಸಲು ತೊಡಗಿದ ಮೇಲೇ ನನಗೆ ದೊರೆತ ಅವಕಾಶದ ಬಗ್ಗೆ ನನಗೆ ಹೆಮ್ಮೆಯೆನಿಸಿದ್ದು. ಈ ಸಾಲುಗಳ ತತ್ವವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಸದಾ ಚಾಲನೆಯಲ್ಲಿಟ್ಟಿದ್ದೇನೆ.

ಹಲವು ಭಾಷೆಗಳಲ್ಲೂ ದೇಶಗಳಲ್ಲೂ ಮಹಾತತ್ವಗಳನ್ನು ಹೇಳುವ ಮಹಾಕಾವ್ಯಗಳು ಮತ್ತು ಉಪನಿಷತ್ತುಗಳು ಸೃಷ್ಟಿಯಾಗಿವೆ. ಆದರೆ ಆ ದೊಡ್ಡ ತತ್ವಗಳನ್ನೆಲ್ಲಾ ಒಬ್ಬ ಸಾಮಾನ್ಯ ಮನುಷ್ಯನ ಹೃದಯವನ್ನೂ ಸ್ಪರ್ಶಿಸುವಂತೆ ಸರಳವಾಗಿ ಹೇಳಿದ್ದು ನಾರಾಯಣ ಗುರುಗಳು ಮಾತ್ರ. ಅವರು ಜನರೊಂದಿಗೆ ಆಡಿದ ಒಂದೊಂದು ಮಾತಿನಲ್ಲೂ ಬರೆದ ಒಂದೊಂದು ಸಾಲುಗಳಲ್ಲೂ ಈ ಸರಳತೆ ಮೈಗೂಡಿ ನಿಂತಿರುವುದನ್ನು ಕಾಣಬಹುದು.

ನಾರಾಯಣ ಗುರುಗಳು ಈಳವ ಜಾತಿಗೆ ಸೀಮಿತರಾದ ಗುರುಗಳಲ್ಲ. ಅವರು ಮನುಷ್ಯ ಜಾತಿಗೇ ಗುರು. ‘ಒಂದೇ ಜಾತಿ, ಒಂದೇ ಮತ, ಒಂದೇ ದೈವ ಮಾನವರಿಗೆ’ ಎಂದೂ ಜಾತಿಯನ್ನು ಕೇಳಬೇಡಿ, ಜಾತಿಯನ್ನು ಹೇಳಬೇಡಿ ಎಂದೂ ಬೋಧಿಸಿದ ಮಹಾಗುರುವನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಮಹಾ ಮೂರ್ಖತನ. ಅಷ್ಟೇ ಅಲ್ಲ ಅದು ಗುರುನಿಂದನೆಗೆ ಸಮಾನವಾದ ಕೃತ್ಯ. ಗುರುಗಳಿಗೆ ಬದುಕಿನ ಕುರಿತಂತೆ ಇದ್ದ ಜ್ಞಾನ ಅಸಾಮಾನ್ಯವಾದದ್ದು. ಅದರಿಂದಾಗಿಯೇ ಅವರು ಜನಸಾಮಾನ್ಯರ ಮೇಲೆ ಬೀರಿದ ಪ್ರಭಾವವೂ ಅನನ್ಯ. ಜಾತಿಭೇದ, ಅಸ್ಪೃಶ್ಯತೆಗಳನ್ನು ವಿರೋಧಿಸಿ ಗುರುಗಳು ಹಾಕಿಕೊಟ್ಟ ಮಾದರಿಗಳು ಮತ್ತು ಅವರು ನಡೆಸಿದ ಆಂದೋಲನಗಳು ಕೇರಳವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿತು. ಅದರಿಂದಾಗಿಯೇ ನಾರಾಯಣ ಗುರುಗಳು ನಾಡಿನ ಗುರುವಾದರು.

ಓಣಂ ಆಚರಣೆಯ ಹಿಂದೆಯೇ ಗುರು ಸಮಾಧಿ ದಿನವೂ ಬಂದಿದೆ. ಇದು ಮತ್ತೊಂದು ಚಿಂತನೆಗೂ ಹೇತುವಾಗಬೇಕು. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಮತ್ತು ಮದ್ಯ ಸೇವನೆ ನಡೆಯುವುದು ಮಹಾಬಲಿ ನಮ್ಮನ್ನು ನೋಡಲು ಬರುತ್ತಾನೆನ್ನುವ ಓಣಂ ದಿನಗಳಲ್ಲಿ. ಯಾವ ಊರಿನವರು ಮದ್ಯ ಸೇವನೆಯಲ್ಲಿ ದಾಖಲೆ ಸೃಷ್ಟಿಸಿದರೆಂಬುದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿದೆ. ಕುಡಿತದಲ್ಲಿ ಮಾಡಿದ ದಾಖಲೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಕಂಡಾಗ ದುಃಖವಾಗುತ್ತದೆ. ಗುರುಗಳು ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ.

“ಮದ್ಯ ತಯಾರಿಸಬೇಡಿ, ಮಾರಬೇಡಿ, ಸೇವಿಸಬೇಡಿ” ಎಂಬುದು ಗುರು ಬೋಧನೆ. ಈ ಅಮಲು ವ್ಯಕ್ತಿಯನ್ನೂ ಕುಟುಂಬವನ್ನೂ ಸಮಾಜವನ್ನೂ ಹಾಳುಗೆಡವುತ್ತದೆ ಎಂಬುದನ್ನು ಅರಿತೇ ಗುರು ಮದ್ಯದಿಂದ ದೂರವಿರಿ ಎಂದು ಬೋಧಿಸಿದ್ದರು. ಅದರ ಪ್ರಸ್ತುತತೆಯನ್ನು ನೆನಪಿಸುವ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಗುರುವನ್ನು ಗೌರವಿಸುವವರು ತಮ್ಮ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಗುರುಗಳ ಈ ಬೋಧನೆಯನ್ನು ಪಾಲಿಸುತ್ತಿದ್ದೇವೆಂದು ಪ್ರಶ್ನಿಸಿಕೊಳ್ಳುವುದು ಒಳ್ಳೆಯದು. ಮದ್ಯಕ್ಕೆ ಸಂಬಂಧಿಸಿದ ಗುರುಗಳ ವಾಕ್ಯವನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದರೆ ನಮ್ಮ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯೊಂದು ಸಾಧ್ಯವಾಗುತ್ತಿತ್ತು.

ಸಾಮಾನ್ಯ ಕುಡುಕನನ್ನು ದೂಷಿಸಿ ಫಲವಿಲ್ಲ. ಅವರು ಬದುಕಿನ ಕಷ್ಟ ಕಾರ್ಪಣ್ಯಗಳನ್ನು ಮರೆಯಲು ಅಮಲಿನಲ್ಲಿ ಅಭಯವನ್ನು ಕಂಡುಕೊಳ್ಳಬಯಸುತ್ತಾರೆ. ದುರದೃಷ್ಟವೆಂದರೆ ಅವರಿಗಾಗಿ ಸರ್ಕಾರವೇ ನಾಡಿನುದ್ದಕ್ಕೂ ಮದ್ಯದಂಗಡಿಗಳನ್ನು ತೆರೆದಿದೆ. ಸರ್ಕಾರದ ಆದಾಯದ ಮೂಲಗಳಲ್ಲಿ ಇದುವೇ ಪ್ರಧಾನವಂತೆ. ಲೋಕಕ್ಕೇ ಮಾದರಿಯಾದ ಗುರುದೇವರು ಜನಿಸಿದ ನಾಡಿನಲ್ಲೇ ಈ ಸ್ಥಿತಿ. ಬಡವರ ಮತ್ತು ಅವರ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡು ಸಂಪಾದಿಸಿದ ಹಣದಲ್ಲಿ ಸರ್ಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದೆ. ಸರ್ಕಾರ ನಡೆಸುವುದಕ್ಕೆ ಈ ಸಂಪತ್ತು ಬೇಕೇ ಎಂದು ಅಧಿಕಾರಿಗಳು ಆಲೋಚಿಸಬೇಕು. ಆಗ ಸರ್ಕಾರದ ಖಜಾನೆಗೆ ಬೇಕಿರುವ ಹಣ ಸಂಗ್ರಹಿಸಲು ಋಜು ಮಾರ್ಗಗಳನ್ನು ಶೋಧಿಸಲು ಸಾಧ್ಯವಾಗುತ್ತದೆ. ಆಡಳಿತಗಾರರು ಜನರ ಒಳಿಗಾಗಿ ಕೆಲಸ ಮಾಡಬೇಕು. ಜನರನ್ನು ನಶೆಯಲ್ಲಿ ಮುಳುಗಿಸಿದ ಹಣದಲ್ಲಿ ಅದೇ ಜನರ ಅಭಿವೃದ್ಧಿ ಮಾಡುತ್ತೇವೆಂಬುದರಲ್ಲಿ ಅರ್ಥವಿಲ್ಲ. ಇದನ್ನು ಅರಿತು ಕಾರ್ಯಪ್ರವೃತ್ತರಾಗುವುದೇ ಗುರುಗಳಿಗೆ ಅರ್ಪಿಸುವ ಬಹುದೊಡ್ಡ ಗೌರವ.

ಸ್ವಾತಂತ್ರ್ಯ ಹೋರಾಟದ ವೇಳೆ ಇಡೀ ದೇಶವೇ ಮಹಾತ್ಮಾ ಗಾಂಧಿಯನ್ನು ಗುರುವಿನಂತೆ ಹಿಂಬಾಲಿಸಿತ್ತು. ಅಂಥ ಮಹಾತ್ಮರಿಗೇ ಗುರುವಾಗಿದ್ದವರು ನಾರಾಯಣ ಗುರು. ಅದರಿಂದಾಗಿಯೇ ಗಾಂಧಿ ಇಲ್ಲಿಯ ತನಕ ಬಂದು ಗುರುಗಳಿಗೆ ಪ್ರಣಾಣವನ್ನರ್ಪಿಸಿ ಚರ್ಚಿಸಿದ್ದು. ಮಹಾಗುರು ಮತ್ತು ಮಹಾತ್ಮರ ನಡುವಣ ಭೇಟಿ ಸಮಾಜಕ್ಕೆ ನೀಡಿದ ಸಂದೇಶವೂ ಬಹುದೊಡ್ಡದೇ. ಗುರುವಚನಗಳನ್ನು ಎಷ್ಟರ ಮಟ್ಟಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂಬ ಪ್ರಶ್ನೆಯನ್ನು ಒಬ್ಬೊಬ್ಬ ಗುರುದೇವಾನುಯಾಯಿಯೂ ಕೇಳಿಕೊಂಡರೆ ಅದು ಬದುಕಿಗೆ ಹೊಸ ಬೆಳಕನ್ನು ಹರಡಿದರೆ ಅದಕ್ಕಿಂತ ದೊಡ್ಡ ಗುರುಪೂಜೆ ಮತ್ತೊಂದಿಲ್ಲ.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು