ಶ್ರೀ ನಾರಾಯಣ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ”

*ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ತನ್ನಿಮಿತ್ತ ಗುರುಗಳ ಸರ್ವಶ್ರೇಷ್ಠ ಬೋಧನೆಯಾದ “ಮಾನವ ಜಾತಿಯೊಂದೇ” ಎಂದು ಸಾರುವ ಪುಟ್ಟ ಘಟನೆ ಇಲ್ಲಿದೆ*…

ಮಲಯಾಳಂ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖರಲ್ಲಿ ಕುಟ್ಟಿಪ್ಪುಳ ಕೃಷ್ಣಪಿಳ್ಳ (1900-1971) ಕೂಡಾ ಒಬ್ಬರು. ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಇವರು ಮತ ಧರ್ಮಗಳನ್ನು ವೈಚಾರಿಕತೆಯ ಒರೆಯಲ್ಲಿ ಪರೀಕ್ಷಿಸಿ ಮಂಡಿಸಿದ ಖ್ಯಾತಿಯುಳ್ಳವರು. ಅವರು 1922ರಲ್ಲಿ ಆಲುವಾ ಅದ್ವೈತಾಶ್ರಮದಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇರಿಕೊಂಡರು. ಈ ಕಾಲದ ಅನುಭವವೊಂದನ್ನು ಅವರು ದಾಖಲಿಸಿದ್ದಾರೆ. ಇದು ಶ್ಯಾಮ್ ಬಾಲಕೃಷ್ಣನ್ ಅವರು ಸಂಪಾದಿಸಿರುವ ‘ಮೌನಪೂನ್ತೇನ್’ ಕೃತಿಯಲ್ಲಿದೆ. 

ಆಲುವಾ ಪಾಠಶಾಲೆಯ ವಿದ್ಯಾರ್ಥಿಗಳಿಗೆ   ಗುರುಗಳು ಪ್ರಾಯೋಜಿಸಿದ ಔತಣ ನೀಡುವ ರೂಢಿಯಿತ್ತು. ವಿವಿಧ ಜಾತಿ ಮತಗಳಿಗೆ ಸೇರಿದವರು ಒಟ್ಟಿಗೆ ಕುಳಿತು ಉಣ್ಣುವುದು ಈ ಔತಣಗಳ ಉದ್ದೇಶ. ಒಮ್ಮೆ ಈ ಔತಣಕ್ಕೆ ಆಶ್ರಮದ ಅಧಿಕಾರಿಗಳು ನನ್ನನ್ನೂ ಆಹ್ವಾನಿಸಿದರು. ಆ ಕಾಲದಲ್ಲಿ ನಾನಿದ್ದ ಸ್ಥಿತಿಯನ್ನು ಗಮನಿಸಿದ್ದ ಅವರಿಗೆ ಈ ಔತಣದ ಆಹ್ವಾನವನ್ನು ಒಪ್ಪಿಕೊಳ್ಳುತ್ತೇನೇಯೋ ಇಲ್ಲವೋ ಎಂಬ ಅನುಮಾನವಿತ್ತು. ವಿವಿಧ ಜಾತಿಗಳಿಗೆ ಸೇರಿದವರ ಸಹಪಂಕ್ತಿ ಭೋಜನ ಆಚಾರಗಳ ಉಲ್ಲಂಘನೆಯಲ್ಲೇ ಅತಿ ದೊಡ್ಡದೆಂದು ಸವರ್ಣ ಹಿಂದೂಗಳು ಭಾವಿಸಿದ್ದ ಕಾಲವದು. ಸಂಪ್ರದಾಯಸ್ಥ  ಕುಟುಂಬದಲ್ಲೇ ಹುಟ್ಟಿ ಅಲ್ಲಿಯ ತನಕ ಜಗತ್ತನ್ನೇ ನೋಡದಂತೆ ಬದುಕಿದ್ದ ನನಗೂ ಈ ವಿಚಾರದಲ್ಲಿ ಸಣ್ಣ ಅನುಮಾನವೇ ಇತ್ತೇನೋ. ಆದರೆ ಆಹ್ವಾನ ಸಿಕ್ಕಾಗ ಹಿಂದು ಮುಂದು ಯೋಚಿಸದೆ ಒಪ್ಪಿಕೊಂಡು ಔತಣಕ್ಕೆ ಹೊರಟೆ. ಪರಯ, ಪುಲಯ, ನಾಯರ್, ಈಳವ, ಕ್ರೈಸ್ತ ಹೀಗೆ ಹೊರತು ಪಡಿಸಿದ ಎಲ್ಲರೂ ಒಂದೇ ಪಂಕ್ತಿಯಲ್ಲಿದ್ದೆವು. ಬ್ರಾಹ್ಮಣರಾರೂ ಅಲ್ಲಿರಲಿಲ್ಲ.

ಗುರುಗಳು ಬಂದು ನಮ್ಮೊಂದಿಗೆ ಕುಳಿತರು. ಅವರ ಹತ್ತಿರವೇ ನನಗೂ ಎಲೆ ಹಾಕಲಾಗಿತ್ತು. ಗುರುಗಳು ನನ್ನತ್ತ ನೋಡಿ ಗಂಭೀರವಾದ ಧ್ವನಿಯಲ್ಲಿ ‘ಹೋಯಿತೇ?’ ಎಂದು ಪ್ರಶ್ನಿಸಿದರು. ನನಗೆ ಅವರೇನು ಕೇಳುತ್ತಿದ್ದಾರೆಂದೇ ಅರ್ಥವಾಗಲಿಲ್ಲ. ಏನು ಹೇಳಬೇಕೆಂದು ತೋಚದೆ ಗಾಬರಿಗೊಂಡೆ

ಅದನ್ನು ಕಂಡ ಗುರುಗಳು ಮಂದಸ್ಮಿತರಾಗಿ ಮತ್ತೆ ಕೇಳಿದರು ‘ಎಲ್ಲಾ ಹೋಯಿತಲ್ಲವೇ?’. ಆ ಹೊತ್ತಿಗೆ ನನ್ನ ಮನಸ್ಸಿನೊಳಗೆ ಅದು ಹೇಗೋ ಆ ಪ್ರಶ್ನೆಗಿರುವ ಉತ್ತರ ಹೊಳೆಯಿತು.

‘ಎಲ್ಲವೂ ಹೋಯಿತು ಸ್ವಾಮಿ’ ಎಂದು ಮೆಲ್ಲಗೆ ವಿನಯಪೂರ್ವಕವಾಗಿ ಉತ್ತರಿಸಿದೆ.

ಜಾತಿಯ ಕುರಿತ ಅನುಮಾನಗಳೆಲ್ಲವೂ ಹೊರಟು ಹೋದವೇ ಎಂಬುದು ಗುರುಗಳ ಪ್ರಶ್ನೆಯಾಗಿತ್ತು. ಸಂಪ್ರದಾಯದ ಹೆಸರಲ್ಲಿ ಗಟ್ಟಿಯಾಗಿ ಅಂಟಿಕೊಂಡಿದ್ದ ಜಾತಿಯ ಕಲೆಯನ್ನು ಅಳಿಸಿ ಹಾಕುವುದು ಆ ಕಾಲದಲ್ಲಿ ಸುಲಭವೇನೂ ಆಗಿರಲಿಲ್ಲ. ಅದು ನಾನು ಉಂಡ ಮೊದಲ ಸಹಪಂಕ್ತಿ ಭೋಜನವಾಗಿತ್ತದು. ನಾರಾಯಣ ಗುರುಗಳ ಸಾನಿಧ್ಯದಲ್ಲಿ ನಾನಂದು ಮಾನವಜಾತಿ ಎಂದೊಂದಿದೆ [ಮಾನವಜಾತಿಯೊಂದೇ] ಎಂದು ಕಂಡುಕೊಂಡೆ!

ಕನ್ನಡ ಅನುವಾದ-ಎನ್. ಎ. ಎಂ. ಇಸ್ಮಾಯಿಲ್

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು